ನನ್ನವಳು

ಇಳಿಸಂಜೆ ಸೂರ್ಯನ ನುಂಗಿದ,
ಬಿಳಿ ಮೋಡದ ಬಣ್ಣದವಳು.
ಕಣ್ಣಂಚಿನಲ್ಲೇ ಪ್ರೀತಿ ಹಂಚುವ,
ಕರಿ ಕಾಡಿಗೆ ಕಣ್ಣಿನವಳು.

ಹೆಜ್ಜೇನಿಗಿಂತ ಸಿಹಿಯಿರುವ,
ತಿಳಿ ಗುಲಾಬಿ ತುಟಿಯವಳು.
ಅರೆಕ್ಷಣದಲ್ಲೇ ಸೋಲಿಸುವ,
ಅತಿ ಮಾದಕ ನಗೆಯವಳು.

ನೋಡಿದರೆ ಮುದ್ದು ಬರುವ,
ಹಾಲ್ಗೆನೆಯ ಕೆನ್ನೆಯವಳು.
ಬಾಡಿದ ಬಳ್ಳಿಗೂ, ಚಿಗುರುವ,
ಆಸೆ ಹುಟ್ಟಿಸೋ ರೂಪದವಳು.

ನನ್ನವಳು…
ಇಳಿಸಂಜೆ ಸೂರ್ಯನ ನುಂಗಿದ,
ಬಿಳಿ ಮೋಡದ ಬಣ್ಣದವಳು.

ಅವಳ ಅಂದ; ಸಾವಿರ ಸಾಲಲ್ಲಿ
ಸುರಿಯಲು ಆಗದು.
ಕೋಟಿ ಬಣ್ಣಗಳ ಬಲೆಯಲ್ಲಿ,
ಬಂಧಿಸಲು ಬಾರದು.
ಅದು ಯಾವ ಕವಿಯ,
ಪದಗಳ ಸುಳಿಗೂ ಸಿಲುಕದು.
ಯಾವ ಕಲಾವಿದನ
ಕುಂಚದ ತುದಿಗೂ ನಿಲುಕದು.

ನನ್ನವಳು…
ಇಳಿಸಂಜೆ ಸೂರ್ಯನ ನುಂಗಿದ,
ಬಿಳಿ ಮೋಡದ ಬಣ್ಣದವಳು.
ಕಣ್ಣಂಚಿನಲ್ಲೇ ಪ್ರೀತಿ ಹಂಚುವ,
ಕರಿ ಕಾಡಿಗೆ ಕಣ್ಣಿನವಳು.

– ಅತೀತ

ಅತೀತ

ಏನು ಹುಡುಕುತಿಹುದೋ?
ಯಾರಿಗೆ ಕಾಯುತಿಹುದೋ?
ಅದೇನು ನೆನೆ ನೆನೆದು,
ಅದೆಲ್ಲಿ ಹೋಗುತಿಹುದೋ?

ನಿಲ್ಲು ನಿಲ್ಲೆಂದರೆ ನಿಲ್ಲದು,
ಓಡು ಓಡೆಂದರೆ ಓಡದು,
ಕಿವುಡಿದು; ಇದ್ಯಾರ ಮಾತು ಕೇಳದು.
ಮನೆ ಇಲ್ಲ, ಮಠ ಇಲ್ಲ,
ಅಲೆಮಾರಿ ಇದು; ನೆಲೆ ಇಲ್ಲದ್ದು.

ಏನು ಹುಡುಕುತಿಹುದೋ?
ಅದೆಲ್ಲಿ ಹೋಗುತಿಹುದೋ?

ಹೆದರಿ ಓಡುತಿಹುದೋ?
ಯಾರ ಬೆನ್ನ ಹತ್ತಿಹುದೋ?
ಎಂದು ಶುರುಮಾಡಿಹುದೋ?
ಅದೆಂದು ಕೊನೆಮಾಡುವುದೋ?
ನಿಗೂಢವಿದು; ಯಾರಿಗೂ ತಿಳಿಯದು.

ಯಾರು ಸತ್ತರೂ, ತಿರುಗಿ ನೋಡದು
ಯಾರು ಅತ್ತರೂ, ‘ಯಾಕೆ?’ ಅನ್ನದು
ಕರುಣೆಯಿಲ್ಲದ್ದು; ಸತ್ತಾದರೂ ಸಾಯದು.
ಬಂಧುಗಳಿಲ್ಲ, ಬಳಗವಿಲ್ಲ ,
ಅನಾಥವಿದು; ಯಾರೂ ಇಲ್ಲದ್ದು.

ಏನು ಹುಡುಕುತಿಹುದೋ?
ಅದೆಲ್ಲಿ ಹೋಗುತಿಹುದೋ?

‘ಬರುವವರು ಬರುವರು,
ಹೋಗುವವರು ಹೋಗುವರು,
ಕೇಳುವುದೇನಿದೆ ಇದರಲಿ?
ಬದುಕು; ಸಾವು ಹುಟ್ಟಿನ ನಿತ್ಯ ಸೂತಕ,
ಹೊಸದೇನಿದೆ ಅದರಲಿ?’
ಎನ್ನುತ
ತನ್ನ ಉದ್ದೇಶ, ಜೀವನ ಸಂದೇಶ,
ಸಾರುತ ಮುಂದೆ ಸಾಗುವುದು.

ಸಮಯ; 
ಇದು ಯಾರಿಗೂ ಕಾಯದು.
ಯಾರ ಊಹೆಗೂ ನಿಲುಕದು.
ಇದು ಅತೀತ; ಇದು ನಿರಂತರ.
ಇದು ಅನಂತ; ಇದು ಅಜರಾಮರ.

ಏನು ಹುಡುಕುತಿಹುದೋ?
ಅದೆಲ್ಲಿ ಹೋಗುತಿಹುದೋ?

-ಅತೀತ

‘ಶಾಶ್ವತ’

ವರ್ಷಾನುಗಟ್ಟಲೆ ಕಾಯ್ದಮೇಲೆ,
ಹರಕೆ ಹೊತ್ತು ಹಡೆದ ಕೂಸು.
ಕಣ್ಣಲ್ಲಿ ಕಣ್ಣಿಟ್ಟು ಸಾಕಿದರು,
ಕಾಲು ನೆಲಕೆ ತಾಕದಂತೆ ನೋಡಿಕೊಂಡರು,
ಹೋದ ತಿಂಗಳೇ ಒಂಬತ್ತು ತುಂಬಿದ್ದವು.
ಮೊನ್ನೆ ಮೊನ್ನೆಯ ಭೂಕಂಪದಲ್ಲಿ,
ಕಟ್ಟಡದಡಿ ಸಿಕ್ಕು ಅಸುನೀಗಿತು…
ಹೆಸರು… ‘ಶಾಶ್ವತ’ !